ಅನಿಲ್ ಶೆಟ್ಟಿ ನೇತೃತ್ವದಲ್ಲಿ ಬೃಹತ್ ಸಮಾವೇಶ

ಫ್ರೀಡಂಪಾರ್ಕ್ ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸಮರ್ಪಕ “ರಾಜ್ಯ ಶಿಕ್ಷಣ ನೀತಿ” ರೂಪಿಸುವಂತೆ ಆಗ್ರಹ.

 ಸರ್ಕಾರಿಶಾಲೆ ಉಳಿಸಿ ಆಂದೋಲನವನ್ನು ಬೆಂಬಲಿಸಿ ಈಗಾಗಲೇ 2 ಲಕ್ಷಕ್ಕು ಹೆಚ್ಚು ಜನರು ಮಿಸ್ಡ್‍ಕಾಲ್ ಕೊಟ್ಟಿದ್ದು, ಸಾವಿರಾರು ಜನರು ಫ್ರೀಡಂಪಾರ್ಕ್‍ನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಿದರು.

ಆಂದೋಲನದ ಮುಖ್ಯ ಪ್ರಚಾರಕರಾದ ಅನಿಲ್ ಶೆಟ್ಟಿ ರವರು ಮಾತನಾಡಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಹಾಗು 12ನೇ ತರಗತಿಯವರೆಗೆ ಉಚಿತ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಮತ್ತು ಸರ್ಕಾರಿಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡಿದರು.

“ಈ ಆಂದೋಲನವು ಯಾವುದೇ ಸರ್ಕಾರದ, ಪಕ್ಷದ, ವ್ಯಕ್ತಿಯ ವಿರೋಧವಿಲ್ಲದೆ ಸಮಸ್ತ ಕನ್ನಡಿಗರೆಲ್ಲರೂ ಸೇರಿ, ಮಕ್ಕಳ ಭವಿಷ್ಯವನ್ನು ಸುಭದ್ರಗೊಳಿಸಲು ಮಾಡಬೇಕಾದ ಮಹತ್‍ಕಾರ್ಯವಾಗಿದ್ದು, ಶಿಕ್ಷಣ ಒಂದೇ ಬಡತನದ ನಿರ್ಮೂಲನೆಗೆ ಇರುವ ಏಕೈಕ ಆಯುಧ” ಎಂದು ಹೇಳಿದರು.

ಅನಿಲ್‍ಶೆಟ್ಟಿ ರವರು ಕೂಡ ಸರ್ಕಾರಿಶಾಲೆಯಲ್ಲಿ ಓದಿದ್ದು, ತಾವು ಓದಿದ ಶಾಲೆಗೆ ಹಣಕಾಸಿನ ನೆರವನ್ನು ನೀಡಲು ಮುಂದಾಗಿದ್ದು, ಸಮಾಜದ ಗಣ್ಯ ವ್ಯಕ್ತಿಗಳು ತಾವುಗಳು ಓದಿದ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಕರೆ ಕೊಟ್ಟರು.

ಆಂದೋಲನದ ಮತ್ತೊಬ್ಬ ಮುಖಂಡರಾದ ಪ್ರಕಾಶ್ ಅಂಚನ್ ರವರು ಈಗಾಗಲೇ ಬಂಟವಾಳದ ದಡ್ಡಲಕಾಡಿನಲ್ಲಿ ಶಾಲೆಯೊಂದನ್ನು ದತ್ತು ಪಡೆದು ಅದನ್ನು ಅಭಿವೃದ್ಧಿಪಡಿಸಿ ಮಾದರಿಶಾಲೆಯನ್ನಾಗಿ ಮಾಡಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ಇವರು ಸರ್ಕಾರಿಶಾಲೆ ಉಳಿಸಿ ಆಂದೋಲನದ ಉದ್ದೇಶ ಮತ್ತು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವ ಶಿಕ್ಷಣ ಯಾತ್ರೆಯ ಬಗ್ಗೆ ವಿವರಣೆ ನೀಡಿದರು.

 ಸರ್ಕಾರಿಶಾಲೆ ಉಳಿಸಿ ಆಂದೋಲನಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರೀಯೆ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಸಮಿತಿಯನ್ನು ರಚಿಸಿ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕಣವು ಲಭ್ಯವಾಗುವಂತೆ ಶ್ರಮಿಸಲಾಗುವುದು.

ಫ್ರೀಡಂಪಾರ್ಕ್ ನಲ್ಲಿ ನಡೆದ ಸಮಾವೇಶದಲ್ಲಿ ರಾಜ್ಯದ ಅನೇಕ ಭಾಗಗಳಿಂದ ಜನರು ಬಂದು ಬಾಗವಹಿಸಿದ್ದು, ತಮ್ಮ ಶಿಕ್ಷಣ ಪ್ರೇಮವನ್ನು ಮೆರೆದರು.

ಈಗಾಗಲೇ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರನ್ನು ಬೇಟಿಯಾಗಿ ಚರ್ಚಿಸಲು ಅವಕಾಶಕೋರಿ ಪತ್ರವನ್ನು ಬರೆಯಲಾಗಿದೆ.

ಕಾರ್ಯಕ್ರಮದಲ್ಲಿ ಪೀಸ್ ಆಟೋ ಯೂನಿಯನ್ ಅಧ್ಯಕ್ಷರಾದ ರಘುನಾರಾಯಣ್, ಜಯಕರ್ನಾಟಕ ಮುಖಂಡರಾದ ರಾಕೇಶ್ ಗೌಡ, ಯುವ ಮುಖಂಡರುಗಳಾದ ಭರತ್, ಶಿವಕುಮಾರ್, ಅರುಣ್, ರಘು, ಸಚಿನ್ ಉಪಸ್ಥಿತರಿದ್ದರು.

ನೀವು ಇಷ್ಟಪಡಬಹುದು